ವಿಶ್ವವಿದ್ಯಾಲಯದ ಇಲ್ಲವೆ ಇತರ ಅಂಗೀಕೃತ ಉನ್ನತಶಿಕ್ಷಣ ಸಂಸ್ಥೆಗಳ ಅಧ್ಯಯನ ಘಟಕವೊಂದರ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳಿಗೆ ಇಲ್ಲವೆ ಯಾವುದಾದರೂ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಥವಾ ಪಾಂಡಿತ್ಯ ಸಾಧಿಸಿದ ಖ್ಯಾತವ್ಯಕ್ತಿಗಳಿಗೆ ಪದವಿ ಅಥವಾ ಪ್ರಶಸ್ತಿಯನ್ನು ನೀಡಲು ಏರ್ಪಡಿಸುವ ಸಾಂಪ್ರದಾಯಿಕ ಸಮಾರಂಭ. ಇದನ್ನು ಇಂಗ್ಲೆಂಡಿನಲ್ಲೂ ಭಾರತ ಮುಂತಾದ ದೇಶಗಳಲ್ಲೂ ಕಾನ್ವೊಕೇಷನ್ ಎಂದು ಕರೆದರೆ ಅಮೆರಿಕದ ಸಂಯುಕ್ತ ಸಂಸ್ಥಾನಗಳಂಥ ದೇಶಗಳಲ್ಲಿ ಕಮೆನ್ಸ್ಮೆಂಟ್ ಅಥವಾ ಗ್ರಾಜುಯೇಷನ್ ಎಂದು ಕರೆಯುತ್ತಾರೆ.

ಪ್ರಾಚೀನ ಭಾರತದಲ್ಲಿ ಘಟಿಕೋತ್ಸವ : ಅಗ್ರಹಾರ, ದೇಗುಲದ ವಿದ್ಯಾಲಯ (ಟೆಂಪಲ್ ಕಾಲೇಜ್), ಬ್ರಹ್ಮಪುರಿ ಮುಂತಾದವುಗಳಂತೆ ಪ್ರಾಚೀನ ಭಾರತದಲ್ಲಿ ಘಟಿಕವೂ ಒಂದು ಮಾದರಿಯ ಉನ್ನತಶಿಕ್ಷಣ ಸಂಸ್ಥೆಯೆನಿಸಿತ್ತು. ಉದಾ-ಹೆಂಜೇರು ಪಟ್ಟಣದ ಮಹಾಘಟಿಕಾಲಯ. ಅಲ್ಲಿನ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸುತ್ತಿದ್ದ ಬೀಳ್ಕೊಡುಗೆ ಸಮಾರಂಭದಿಂದ ಈ ಹೆಸರು ಬಂದಿರುವುದು ಸಂಭವ. ಪ್ರಾಚೀನ ಭಾರತದ ವೈದಿಕ ಶಿಕ್ಷಣಪದ್ಧತಿಯಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದ ಸ್ನಾತಕರು (ಗ್ರ್ಯಾಜುಯೇಟ್ಸ್) ಜೀವನವನ್ನು ಆರಂಭಿಸುವ ಮುನ್ನ ಎಂದರೆ, ಬ್ರಹ್ಮಚರ್ಯದಿಂದ ಗೃಹಸ್ಥಾಶ್ರಮಕ್ಕೆ ಕಾಲಿಡುವಾಗ ಆಚರಿಸುತ್ತಿದ್ದ ಸಮಾವರ್ತನ ಸಂಸ್ಕಾರವನ್ನು ಇದಕ್ಕೆ ಹೋಲಿಸಬಹುದು. ಗುರುಕುಲದಲ್ಲಿ ವಿದ್ಯಾರ್ಥಿ ಉಪನಯನಾನಂತರ ಸುಮಾರು 12 ವರ್ಷಗಳ ಶಿಕ್ಷಣವನ್ನು ಮುಗಿಸಿದ ಮೇಲೆ ಒಂದು ಶುಭದಿನ ಸಮಾವರ್ತನ ಏರ್ಪಡುತ್ತಿತ್ತು. ವಿದ್ಯಾರ್ಥಿ ಮುಂಜಾನೆಯೆಲ್ಲ ಮನೆಯಲ್ಲೇ ಉಳಿದಿದ್ದು, ಮಧ್ಯಾಹ್ನ ಹೊರಗೆ ಬಂದು, ಕ್ಷೌರ ಮಾಡಿಸಿಕೊಂಡು ತಾನು ಧರಿಸಿದ್ದ ಮೇಖಲೆ, ಅಜಿನ ಮುಂತಾದ ವಿದ್ಯಾರ್ಥಿ ಲಾಂಛನಗಳನ್ನು ವಿಸರ್ಜಿಸುತ್ತಿದ್ದ. ಅವನ ಗುರುವೇ ಅವನಿಗೆ ಸುಗಂಧ ಜಲದಲ್ಲಿ ಸ್ನಾನಮಾಡಿಸಿ, ನೂತನ ವಸ್ತ್ರಗಳನ್ನು ತೊಡಿಸಿ, ಒಡವೆಗಳನ್ನಿಟ್ಟು, ಪುಷ್ಪಮಾಲಿಕೆ ಹಾಕಿ, ಪೇಟ ಕಟ್ಟಿ, ಛತ್ರಿ ಚಡಾವುಗಳನ್ನು ಕೊಟ್ಟು ಮಂತ್ರೋಚ್ಚಾರಣೆಯ ನಡುವೆ ಗೃಹಸ್ಥಾಶ್ರಮಕ್ಕೆ ಪದಾರ್ಪಣ ಮಾಡಿಸುತ್ತಿದ್ದ (ಗೋಭಿಲ ಗೃಹ್ಯಸೂತ್ರ), ಶ್ರೀಮಂತ ಮನೆತನಗಳಲ್ಲಿ ಅದೇ ಉಡುಪನ್ನು ಗುರುವಿಗೂ ತೊಡಿಸುತ್ತಿದ್ದರು. ಅನಂತರ, ಹೋಮ ಮಾಡಿ ಗುರು ಶಿಷ್ಯನಿಗೆ ‘ನಿನಗೆ ಬೋಧಿಸಲು ಅನೇಕ ಮಂದಿ ವಿದ್ಯಾರ್ಥಿಗಳು ಸಿಕ್ಕಲಿ’ ಎಂದು ಆಶೀರ್ವದಿಸುತ್ತಿದ್ದ (ಬೋಧಾಯನ ಗೃಹ್ಯಸೂತ್ರ) ಆಮೇಲೆ ಗುರು ಶಿಷ್ಯನಿಗೆ ರಾಜ, ಅಳಿಯ ಮುಂತಾದ ವಿಶೇಷ ಅತಿಥಿಗಳಿಗೆ ನೀಡುವ ಮಧುಪರ್ಕವನ್ನು ಆಹಾರವಾಗಿ ನೀಡುತ್ತಿದ್ದ. ಈ ಸಂಸ್ಕಾರದ ಅಂಗವಾಗಿ ಏರ್ಪಡುತ್ತಿದ್ದ ವಿದ್ವಜ್ಜನಗೋಷ್ಠಿಗೆ ಗುರು ತನ್ನ ಶಿಷ್ಯನನ್ನು ಆನೆಯ ಮೇಲೆ ಕೂರಿಸಿ ಕರೆದು ತಂದು ಆತ ಶ್ರೇಷ್ಠ ಪಂಡಿತನೆಂದು ಗೋಷ್ಠಿಗೆ ಪರಿಚಯ ಮಾಡಿಕೊಡುತ್ತಿದ್ದ. ಅಗತ್ಯವೆನಿಸಿದರೆ ಸ್ನಾತಕ ಅಲ್ಲಿನ ಚರ್ಚೆಯಲ್ಲಿ ಭಾಗವಹಿಸಿ ತನ್ನ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದ. ಅಂದಿಗೆ ಆ ವಿದ್ಯಾರ್ಥಿಗೆ ತಾನು ಗಳಿಸಿದ ಪಾಂಡಿತ್ಯಕ್ಕೆ ತಕ್ಕ ಪ್ರಶಸ್ತಿ ಅಥವಾ ಪದವಿ ದೊರೆತಂತಾಗುತ್ತಿತ್ತು. ಬೌದ್ಧ ಶಿಕ್ಷಣಪದ್ಧತಿಯಲ್ಲೂ ಘಟಿಕೋತ್ಸವಕ್ಕೆ ಸಮಾನವೆನ್ನಬಹುದಾದ ಒಂದು ಸಂಸ್ಕಾರ ಪ್ರಚಾರದಲ್ಲಿತ್ತು. ಇಪ್ಪತ್ತು ವರ್ಷ ವಯಸ್ಸಾದ ಮೇಲೆ ಬೌದ್ಧವಿಹಾರದಲ್ಲಿ ಶಿಕ್ಷಣ ಮುಗಿಸಿದ ಶ್ರಮಣನಿಗೆ ಏರ್ಪಡುತ್ತಿದ್ದ ಈ ಸಮಾರಂಭಕ್ಕೆ ಉಪಸಂಪದ ಎಂದು ಹೆಸರಿತ್ತು. ವೈದಿಕ ಶಿಕ್ಷಣಪದ್ಧತಿಯ ಸಮಾವರ್ತನ ಸಂಸ್ಕಾರಕ್ಕೆ ಇದು ಸಮವೆಂದು ಭಾವಿಸಬಹುದು. ಆತನಕ ಅಲ್ಲಿಯವರೆಗೆ ಸಂಘದ ಸದಸ್ಯತ್ವಕ್ಕೆ ಉಮೇದುವಾರನಂತೆ ಶಿಕ್ಷಣಪಡೆಯುತ್ತಿದ್ದ ಅವನು ಉಪಸಂಪದದ ಅನಂತರವೇ ಅದರ ಪುರ್ಣ ಸದಸ್ಯತ್ವವನ್ನು ಪಡೆಯುತ್ತಿದ್ದ. ಸಮಾವರ್ತನವಾದ ಮೇಲೆ ವಿದ್ಯಾರ್ಥಿ ಪಂಡಿತವರ್ಗಕ್ಕೆ ಅರ್ಹತೆ ಪಡೆಯುತ್ತಿದ್ದಂತೆ ಉಪಸಂಪದದಿಂದ ಆತ ಬೌದ್ಧಸಂಘದ ಪುರ್ಣಸದಸ್ಯನಾಗುತ್ತಿದ್ದ. ಬ್ರಹ್ಮಚಾರಿ ಸಮಾವರ್ತನದ ಅನಂತರ ಗೃಹಸ್ಥಾಶ್ರಮ ಸೇರುತ್ತಿದ್ದಂತೆ ಶ್ರಮಣ ಉಪಸಂಪದದ ಅನಂತರ ಆಜೀವಬ್ರಹ್ಮಚಾರಿಯಾಗಿ ಉಳಿಯಬೇಕಾಗಿದ್ದ ಸಂನ್ಯಾಸಾಶ್ರಮವನ್ನು ಆರಂಭಿಸುತ್ತಿದ್ದ. ಬೌದ್ಧಸಂಘಗಳು ಮಹಿಳೆಯರಿಗೂ ಪ್ರವೇಶಾವಕಾಶವನ್ನು ನೀಡಿದಮೇಲೆ ಉಪಸಂಪದ ಸಂಸ್ಕಾರ ಅವರಿಗೂ ಅನ್ವಯಿಸುತ್ತಿತ್ತು. ವಿವಿಧ ವೃತ್ತಿಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಗಿಸಿದ ಮೇಲೆ ಒಂದು ರೀತಿಯ ಘಟಿಕೋತ್ಸವವನ್ನು ಪ್ರಾಚೀನ ಭಾರತದಲ್ಲಿ ನಡೆಸುತ್ತಿದ್ದರು. ಉದಾ. ಸೈನಿಕ ಶಿಕ್ಷಣವನ್ನು ಮುಗಿಸಿದವರಿಗೆ ಕೊಡುತ್ತಿದ್ದ ‘ಚುರಿಕ ಬಂಧ’ ಎಂಬ ಸಂಸ್ಕಾರ. ಬ್ರಾಹ್ಮಣರಲ್ಲಿದ್ದ ಸಮಾವರ್ತನಕ್ಕೆ ಇದು ಸಮವೆನ್ನಬಹುದು. ಆಗ ಸೈನಿಕ ಶಿಕ್ಷಣವನ್ನು ಮುಗಿಸಿದವರಿಗೆ ಸಾಹಸ ಜೀವನದ ಆರಂಭದ ಕುರುಹಾಗಿ ಕಠಾರಿಯೊಂದನ್ನು ಅರ್ಪಿಸುತ್ತಿದ್ದರು (ವೀರಮಿತ್ರೋದಯ ಸಂಸ್ಕಾರ ಪ್ರಕಾಶದಲ್ಲಿ ನಾರದಸ್ಮೃತಿ). 19ನೆಯ ಶತಮಾನದ ಆದಿಯಲ್ಲೂ ರಾಜಪುತ್ರಸ್ಥಾನದ ಕ್ಷತ್ರಿಯರಲ್ಲಿ ಈ ಸಮಾರಂಭ ಪ್ರಚಾರದಲ್ಲಿತ್ತು. ವಿವಾಹಕ್ಕೆ ಮುಂಚಿತವಾಗಿ ಆಚರಿಸುತ್ತಿದ್ದ ಈ ಸಮಾರಂಭವನ್ನು ‘ಖರ್ಗ್ ಬಂದಾಯ್’ (ಚುರಿಕ ಬಂಧ ಎಂಬುದರ ತದ್ಭವ) ಎಂದು ಕರೆಯುತ್ತಿದ್ದರು.

ಆಧುನಿಕ ಭಾರತದಲ್ಲಿ ಘಟಿಕೋತ್ಸವ : ಭಾರತದಲ್ಲಿ ಆಧುನಿಕ ವಿಶ್ವವಿದ್ಯಾಲಯಗಳೂ ಇತರ ಉನ್ನತ ಶಿಕ್ಷಣಸಂಸ್ಥೆಗಳೂ ಇಂಗ್ಲಿಷ್ ಶಿಕ್ಷಣ ಪದ್ಧತಿಯ ಮಾದರಿಯಲ್ಲಿ ರೂಪುಗೊಂಡಿವುದರಿಂದ ಸದ್ಯದಲ್ಲಿ ಇಂಗ್ಲಿಷ್ ಸಂಪ್ರದಾಯದಲ್ಲೇ ಘಟಿಕೋತ್ಸವ ನಡೆಯುತ್ತಿದೆ. ಸಾಮಾನ್ಯವಾಗಿ ಪ್ರತಿ ವಿಶ್ವವಿದ್ಯಾಲಯವೂ ಇತರ ಉನ್ನತ ಶಿಕ್ಷಣಸಂಸ್ಥೆಗಳೂ ಪ್ರತಿವರ್ಷವೂ ನಡೆಸುವ ಈ ಸಮಾರಂಭಕ್ಕೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಬರುವರು. ವೈದ್ಯ, ಎಂಜಿನಿಯರಿಂಗ್ ಮುಂತಾದ ವೃತ್ತಿಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಧ ಅಥವಾ ಒಂದು ವರ್ಷ ಪ್ರಯೋಗಕ್ಷೇತ್ರದಲ್ಲಿ ಅನುಭವಾ(ಅಭ್ಯಾಸಾ)ರ್ಥ ಸೇವೆಸಲ್ಲಿಸಿದ ಅನಂತರವೇ ಪದವಿದಾನಕ್ಕೆ ಅರ್ಹತೆ ಪಡೆಯುವರು.

ಬೇರೆ ಬೇರೆ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಸಮಾರಂಭಕ್ಕೆ ಬರುವಾಗ ಆಯಾ ಪದವಿಗೆ ನಿಷ್ಕರ್ಷಿಸಿರುವ ಬಣ್ಣ ನಿಲುವಂಗಿ (ಗೌನ್), ತಲೆಯುಡಿಗೆಗಳನ್ನು (ಹುಡ್), ಧರಿಸಿಕೊಂಡು ಬರಬೇಕೆಂಬ ನಿಯಮವುಂಟು. ಸಮಾರಂಭಕ್ಕೆ ರಾಷ್ಟ್ರದ ವರಿಷ್ಠ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ಬರುವರು. ಸಮಾರಂಭದ ಕಾರ್ಯಕ್ರಮಗಳು ಆರಂಭವಾಗುವುದಕ್ಕೆ ಅರ್ಧ ಅಥವಾ ಕಾಲು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳೂ ವಿದ್ವಜ್ಜನರೂ ಇತರ ಆಹ್ವಾನಿತರೂ ಬಂದು ಸಭಾಂಗಣದಲ್ಲಿ ಕೂಡುವರು. ಮಹಾ ಕುಲಪತಿಗಳು ಆಗಮಿಸಿದೊಡನೆ ಅವರನ್ನು ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರೂ ವಿವಿಧ ವಿದ್ಯಾಮಂಡಳಿಗಳ ಅಧ್ಯಕ್ಷರೂ (ಡೀನ್ಗಳು) ಕುಲಸಚಿವರು ಮತ್ತು ಪರೀಕ್ಷಾಧಿಕಾರಿಗಳೂ ಬರಮಾಡಿಕೊಳ್ಳುವರು. ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜೊಂದರ ಮುಖ್ಯಾಧಿಕಾರಿ ವಿಶ್ವವಿದ್ಯಾಲಯದ ಅಧಿಕಾರದಂಡವನ್ನು ಹೊತ್ತು ಮುಂದೆ ಸಾಗಿ ಅದನ್ನು ವೇದಿಕೆಯ ಮಧ್ಯೆ ಸಭೆಗೆ ಕಾಣುವಂತೆ ಇರಿಸುವರು. ಮಹಾಕುಲಪತಿಗಳು ವೇದಿಕೆಯ ಮೇಲೆ ಕುಳಿತ ಮೇಲೆ ಮಿಕ್ಕವರೂ ತಮ್ಮ ತಮ್ಮ ಆಸನಗಳಲ್ಲಿ ಕೂಡುವರು. ಮಹಾಕುಲಪತಿಗಳು ಕುಲಪತಿಗಳ ಕೋರಿಕೆಯಂತೆ ಸಮಾರಂಭವನ್ನು ಉದ್ಘಾಟಿಸುವರು. ಪದವೀದಾನಕ್ಕೆ ಬಂದಿರುವ ಅಭ್ಯರ್ಥಿಗಳನ್ನು ನಿಲ್ಲುವಂತೆ ಹೇಳಿ, ಕುಲಪತಿಗಳು-ನಿಮಗೆ ಪದವಿ ನೀಡಿದರೆ ತ್ರಿಕರಣಪುರ್ವಕವಾಗಿ ವಿಶ್ವವಿದ್ಯಾಲಯದ ಕೀರ್ತಿಗೊಪ್ಪುವಂತೆ ನಡೆದುಕೊಳ್ಳುವಿರಾ? ನಿಮ್ಮ ಕೈಲಾದಮಟ್ಟಿಗೆ ಸಾಮಾಜಿಕ ಪ್ರಗತಿಗೂ ಸೋದರವರ್ಗದ ಕಲ್ಯಾಣಕ್ಕೂ ದುಡಿಯುವಿರಾ? ನೈತಿಕ ಮತ್ತು ಜ್ಞಾನಕ್ಷೇತ್ರಗಳನ್ನು ಬಲಪಡಿಸಿ ವೃದ್ಧಿಪಡಿಸುವಿರಾ? ಎಂದು ಪ್ರಶ್ನಿಸುವರು. ಈ ಮೂರು ಅಂಶಗಳಿಗೂ ಪ್ರತ್ಯೇಕವಾಗಿ ಎಲ್ಲ ಅಭ್ಯರ್ಥಿಗಳೂ ಹಾಗೆಯೇ ನಡೆದುಕೊಳ್ಳುವುದಾಗಿ ಪ್ರಮಾಣವಚನವನ್ನು ನೀಡಿ ಅನಂತರ ಕುಳಿತುಕೊಳ್ಳುವರು. ಶಿಕ್ಷಣ, ಎಂಜಿನಿಯರಿಂಗ್, ನ್ಯಾಯ, ವೈದ್ಯ, ವ್ಯವಸಾಯ, ವಾಣಿಜ್ಯ ಮುಂತಾದ ವೃತ್ತಿ ಮತ್ತು ತಾಂತ್ರಿಕ ವಿಷಯಗಳ ಅಭ್ಯರ್ಥಿಗಳನ್ನು ಉದ್ದೇಶಿಸಿ-ನಿಮ್ಮ ನಿಮ್ಮ ವೃತ್ತಿಗೆ ಸಂದ ಕರ್ತವ್ಯಗಳನ್ನು ನಿರ್ವಹಿಸುತ್ತ ಅವುಗಳ ಉದ್ದೇಶ ಮತ್ತು ಪರಿಶುದ್ಧತೆಗಳನ್ನು ಕಾಪಾಡಿಕೊಂಡು ಬರುವಿರಾ? ನಿಮ್ಮ ವೃತ್ತಿಕೌಶಲವನ್ನು ಕ್ಷುಲ್ಲಕ, ಅನುಚಿತ ಉದ್ದೇಶಗಳಿಗಾಗಿ ಬಳಸದಿರುವಿರಾ? ಎಂದು ಪ್ರಶ್ನಿಸುವರು. ಅವರೆಲ್ಲ ಎದ್ದು ನಿಂತು ಹಾಗೆಯೇ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸುವರು. ಅನಂತರ ವಿದ್ಯಾಮಂಡಲಿಗಳ ಅಧ್ಯಕ್ಷರು ಒಬ್ಬೊಬ್ಬರಾಗಿ ತಮ್ಮ ತಮ್ಮ ವಿಷಯ ವಿಭಾಗದ ಅಭ್ಯರ್ಥಿಗಳನ್ನು ಆಯಾ ಪದವಿಗೆ ಅರ್ಹರೆಂದು ಶಿಫಾರಸು ಮಾಡುವರು. ಅವರೆಲ್ಲ ಎದ್ದು ನಿಂತು ಮಹಾಕುಲಪತಿಗಳಿಗೆ ನಮಸ್ಕರಿಸುವರು; ಆಯಾ ವಿಷಯವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳು ಮಹಾಕುಲಪತಿಗಳಿಂದ ಪದಕ ಪ್ರಶಸ್ತಿಗಳನ್ನು ಸ್ವೀಕರಿಸುವರು. ಹೀಗೆ ಎಲ್ಲ ವಿಷಯ ವಿಭಾಗಗಳ ಅಭ್ಯರ್ಥಿಗಳನ್ನೂ ಶಿಫಾರಸು ಮಾಡಿದ ಮೇಲೆ ಎಲ್ಲ ಅಭ್ಯರ್ಥಿಗಳೂ ಎದ್ದು ನಿಲ್ಲುವರು. ಮಹಾಕುಲಪತಿಗಳು ಅಭ್ಯರ್ಥಿಗಳಿಗೆ ಅವರವರು ಉತ್ತೀರ್ಣರಾಗಿರುವ ಪರೀಕ್ಷೆಯ ಪದವಿಗಳನ್ನು ಅನುಗ್ರಹಿಸುವರು. ಅದರ ಗುರುತಿಗಾಗಿ ಪ್ರಶಸ್ತಿಪತ್ರಗಳ ವಿತರಣೆಯಾಗುವುದು. ಮುಂದೆ ಅವರು ಆಯಾ ಪದವಿಗೆ ನಿಷ್ಕರ್ಷಿತವಾಗಿರುವ ಬಣ್ಣದ ಲಾಂಛನವನ್ನು ಧರಿಸಲು ಅನುಮತಿ ನೀಡುವರು. ಆಹ್ವಾನಿತ ಮುಖ್ಯ ಅತಿಥಿಗಳು ನೂತನ ಪದವೀಧರರನ್ನುದ್ದೇಶಿಸಿ ಉಪದೇಶಭಾಷಣ ಮಾಡಿದ ನಂತರ. ಸಮಾರಂಭ ಮುಕ್ತಾಯವಾಗುವುದು. 

ಘಟಿಕೋತ್ಸವ (ಉಪದೇಶ) ಭಾಷಣ : ಘಟಿಕೋತ್ಸವಕ್ಕೆ ಕಳಸವಿಟ್ಟಂತೆ, ಪದವೀದಾನದ ಅನಂತರ, ಮುಖ್ಯ ಅತಿಥಿಗಳು ಸ್ನಾತಕರನ್ನುದ್ದೇಶಿಸಿ ಉಪದೇಶ ಭಾಷಣ (ನೋಡಿ) ಮಾಡುವುದು ಸಾಂಪ್ರದಾಯಿಕವಾಗಿ ನಡೆದುಬಂದಿದೆ. ಈ ಸಂಪ್ರದಾಯಕ್ಕೆ ಸರಿಸಮಾನ ವೆನ್ನಬಹುದಾದ ಕೆಲವು ಆಚರಣೆಗಳು ಪ್ರಾಚೀನ ಭಾರತದ ಶಿಕ್ಷಣಪದ್ಧತಿಯಲ್ಲಿದ್ದುದು ಕಂಡುಬರುತ್ತದೆ (ತೈತ್ತಿರೀಯ ಉಪನಿಷತ್ತು). ಆಗ ಮಾಡುತ್ತಿದ್ದ ಉಪದೇಶ ಭಾಷಣವೊಂದು ಈ ರೀತಿ ಇದೆ : ‘ಸತ್ಯವನ್ನು ನುಡಿ. ನಿನ್ನ ಕರ್ತವ್ಯವನ್ನು ಮಾಡು. ನಿತ್ಯ ವೇದಾಧ್ಯಯನ ಮತ್ತು ಬೋಧನೆಗಳನ್ನು ಮಾಡುವುದನ್ನು ಮರೆಯಬೇಡ. ಉಪಯುಕ್ತವಾದುದನ್ನು ಬಿಡಬೇಡ. ಘನತೆಗೇರಲು ಬರುವ ಅವಕಾಶವನ್ನು ಕಳೆದುಕೊಳ್ಳಬೇಡ. ನಿನ್ನ ಗುರುಗಳೊಡನೆ ಮುಂದೆಯೂ ಸಂಪರ್ಕ ಹೊಂದಿರು. ನಿನ್ನ ಮಾತೆ, ಪಿತ, ಗುರು, ಅತಿಥಿ - ಇವರನ್ನು ದೇವರೆಂದು ಭಾವಿಸು. ದೋಷರಹಿತ ಕಾರ್ಯಗಳನ್ನು ಮಾತ್ರ ಆಚರಿಸು. ನಾವು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಮಾತ್ರ ನೀನು ಅನುಕರಿಸು. ವಿದ್ವಜ್ಜನರಿಗೆ ಗೌರವ ತೋರು. ನೀನು ಏನು ನೀಡಿದರೂ ನಂಬಿಕೆ, ಸಂತೋಷ, ದೈನ್ಯ, ಭಕ್ತಿ, ದಯೆ - ಇವುಗಳಿಂದ ಕೂಡಿದವನಾಗಿರು. ಸಮಸ್ಯೆ ಎದುರಾದಾಗ ವಿವೇಚನೆಯಿಂದ ನಡೆದುಕೊ.' ಇದನ್ನು ವಿದ್ಯಾರ್ಥಿಯ ಗುರುಗಳೇ ನೀಡುತ್ತಿದ್ದರು. ಹಾಗೆಯೆ, ವೈದ್ಯವಿದ್ಯೆಯನ್ನು ಮುಗಿಸಿದ ಸ್ನಾತಕರಿಗೆ ನೀಡಬಹುದಾದ ಉಪದೇಶವನ್ನು ಚರಕ ಸಂಹಿತೆಯಲ್ಲಿ ಸೂಚಿಸಿದೆ. ‘ವೈದ್ಯವೃತ್ತಿ ಆರಂಭಿಸಲು ಅನುಮತಿ ದೊರೆತು ವೃತ್ತಿನಿರತನಾದಾಗ ನಿನ್ನ ಗುರುಗಳಿಗೆ ತಕ್ಕ ಗುರುದಕ್ಷಿಣೆ ನೀಡು, ವೃತ್ತಿವ್ಯಾಪಾರ, ಅಭಿವೃದ್ಧಿ, ಖ್ಯಾತಿ - ಇವೆಲ್ಲ ಈಗ ಈ ಲೋಕದಲ್ಲೂ ಮುಂದೆ ಸ್ವರ್ಗದಲ್ಲೂ ಲಭಿಸುವಂತಾಗಲು ಬ್ರಾಹ್ಮಣರಿಗೂ ಹಸು ಮತ್ತು ಇತರ ಪ್ರಾಣಿಗಳಿಗೂ ಒಳ್ಳೆಯದನ್ನು ಮಾಡುವ ಗುರಿಯಿಟ್ಟುಕೊ. ರೋಗಿಗಳ ಆರೋಗ್ಯ ಉತ್ತಮಗೊಳಿಸಲು ನಿತ್ಯವೂ ಮನಃಪುರ್ವಕವಾಗಿ ಯತ್ನಿಸು. ಇತರರ ಸಂಪತ್ತು, ಮಡದಿ ಇವುಗಳ ಬಗ್ಗೆ ದುಶ್ಚಿಂತೆ ಬೇಡ. ಉಡುಪು ಸರಳವಾಗಿರಲಿ, ಆಡಂಬರ ಬೇಡ, ಕುಡಿಯಬೇಡ, ಪಾಪಕಾರ್ಯ ಮಾಡಬೇಡ ಮಾಡಲು ಇತರರಿಗೆ ಸಹಾಯ ಮಾಡಬೇಡ. ನಿನ್ನ ಮಾತು ಸತ್ಯದಿಂದ ಕೂಡಿದ್ದು ಸರಳವೂ ನಯವೂ ಆಗಿದ್ದು ಸಂದರ್ಭಕ್ಕೆ ತಕ್ಕಂತೆ ಇರಲಿ. ನಿನ್ನ ಜ್ಞಾನ ಮತ್ತು ಉಪಕರಣಗಳನ್ನು ಹೆಚ್ಚಿಸಿಕೊ. ಖಂಡಿತವಾಗಿ ವಾಸಿಯಾಗದೆಂದು ಖಚಿತಪಟ್ಟ ರೋಗಿಗಳಿಗೂ ಇನ್ನೇನು ಸಾಯುವವರಿಗೂ ಪತಿ ಅಥವಾ ಪೋಷಕರು ಹಾಜರಿರದಿದ್ದ ಹೆಂಗಸಿಗೂ ಔಷಧಿ ಕೊಡಬೇಡ. ಪತಿ ಅಥವಾ ಪೋಷಕರು ಕಾಣದಂತೆ ಹೆಂಗಸರು ನೀಡುವ ಹಣ ಸ್ವೀಕರಿಸಬೇಡ. ರೋಗಿಯ ಕೊಠಡಿಗೆ ಹೋದೊಡನೆ ನಿನ್ನ ಗಮನವೆಲ್ಲ ರೋಗಿಯ ಮತ್ತು ಔಷಧೋಪಚಾರದ ಕಡೆ ಇರಲಿ. ರೋಗಿಯ ಮತ್ತು ಅವನ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಯನ್ನೆಲ್ಲ ರಹಸ್ಯವಾಗಿಡು. ಆಘಾತವಾಗುವಂತಿದ್ದರೆ, ರೋಗಿ ಸಾಯುವ ಸೂಚನೆ ಕಂಡುಬಂದರೆ ಅದನ್ನು ನಂಟರಿಷ್ಟರಿಗೆ ತಿಳಿಸಬೇಡ. ನಿನ್ನ ವೃತ್ತಿಯಲ್ಲಿ ಒಳ್ಳೆಯ ಅನುಭವವಿದ್ದರೂ ಜಂಬಕೊಚ್ಚಿಕೊಳ್ಳಬೇಡ. ನಿರಂತರವೂ ವೃತ್ತಿದಕ್ಷತೆ ಹೆಚ್ಚಿಸಿಕೊಳ್ಳಲು ಯತ್ನಿಸು. ನೀನು ವೃತ್ತಿನಿರತನಾಗುವಾಗ ನೂತನ ಅನುಭವವನ್ನು ಸಾಧಿಸುತ್ತಿರು. ನಿನಗೆ ಅನುಕೂಲವಾಗತಕ್ಕ ಮಾತನ್ನಾಗಲಿ ಅನುಭವವನ್ನಾಗಲಿ ಶತ್ರುಗಳಾದರೂ ಚಿಂತೆಯಿಲ್ಲ, ಕೇಳಿ ತಿಳಿದುಕೊ, ಇದು ಆ ಉಪದೇಶದ ಸಾರ. ಹೀಗೆಯೇ, ಇತರ ವೃತ್ತಿಶಿಕ್ಷಣ ಪಡೆದ ಸ್ನಾತಕರಿಗೂ ವಿಶಿಷ್ಟ ರೀತಿಯ ಉಪದೇಶ ನೀಡುತ್ತಿದ್ದಿರಬೇಕು.

ಆಧುನಿಕ ವಿಶ್ವವಿದ್ಯಾನಿಲಯಗಳ ಅಥವಾ ಉನ್ನತ ಶಿಕ್ಷಣಸಂಸ್ಥೆಗಳ ಘಟಿಕೋತ್ಸವ ಸಮಾರಂಭದಲ್ಲಿ ಉಪದೇಶ ಭಾಷಣ ಮಾಡಲು ಅಧಿಕಾರಸ್ಥಾನದಿಂದ, ರಾಜಕೀಯ ಪ್ರಭಾವದಿಂದ ಅಥವಾ ಪಾಂಡಿತ್ಯದಿಂದ ಖ್ಯಾತಿವೆತ್ತ ವ್ಯಕ್ತಿಯೊಬ್ಬರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದುಂಟು. ಕೆಲವು ವಿಶ್ವವಿದ್ಯಾಲಯಗಳು ಅಂಥ ಮುಖಂಡರ ಜೊತೆಗೆ ಒಬ್ಬ ಸ್ನಾತಕನೂ ಭಾಷಣವೀಯಲು ಅವಕಾಶ ಕಲ್ಪಿಸುತ್ತಿರುವರು. ಇದರಿಂದ ಜೀವನ ಆರಂಭಿಸಲಿರುವ ತರುಣ ತರುಣಿಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಾಗುತ್ತದೆ. ಇದೊಂದು ಒಳ್ಳೆಯ ಸಂಪ್ರದಾಯವೆಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಸದ್ಯದಲ್ಲಿ ನಡೆಯುತ್ತಿರುವ ಘಟಿಕೋತ್ಸವದ ಪರಕೀಯ ಸಂಪ್ರದಾಯವನ್ನೂ ಸಾಮೂಹಿಕವಾಗಿ ಪದವಿ ನೀಡುವ ಪದ್ಧತಿಯನ್ನೂ ಅನೇಕರು ಟೀಕಿಸುವರು. ಅಭ್ಯರ್ಥಿಗಳು ಸಮಾರಂಭಕ್ಕೆ ಬರಲು ಧರಿಸಬೇಕಾಗಿರುವ ಪೋಷಾಕು ಪಾಶ್ಚಾತ್ಯ ದೇಶಗಳಲ್ಲಿ ಪ್ರಚಾರದಲ್ಲಿದ್ದು, ರಾಜಕೀಯ ಕಾರಣದಿಂದಾಗಿ ಇಲ್ಲೂ ಆಚರಣೆಗೆ ಬಂದಿದೆ. ಭಾರತ ಸ್ವತಂತ್ರವಾದ ಮೇಲೂ ಅದನ್ನೇಕೆ ಮುಂದುವರಿಸಬೇಕೆಂಬ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ. ನಿಲುವಂಗಿ, ಲಾಂಛನವಸ್ತ್ರ ಭಾರತೀಯ ಸಂಸ್ಕೃತಿಗೆ ಹೊಂದಿ ಬಂದವಲ್ಲ; ಇಲ್ಲಿನ ಹವಾಗುಣಕ್ಕೆ ಅವುಗಳ ಅಗತ್ಯವೂ ಇಲ್ಲ. ಅವುಗಳ ಬದಲು ಕಚ್ಚೆ, ನಿಲುವಂಗಿ, ಪೇಟ, ಉತ್ತರೀಯ ಅಥವಾ ಧೋತ್ರವನ್ನು ಭಾರತೀಯ ಘಟಿಕೋತ್ಸವದ ಪೋಷಾಕಾಗಿ ಏಕೆ ಅಂಗೀಕರಿಸಬಾರದೆಂಬ ಪ್ರಶ್ನೆಯನ್ನು ಅನೇಕರು ಎತ್ತಿರುವರು. ಇನ್ನು ಕೆಲವರು ರಷ್ಯ, ಜಪಾನ್ ಮುಂತಾದ ದೇಶಗಳು ವಿಶೇಷ ಉಡುಪನ್ನೇ ಸಮಾರಂಭಕ್ಕೆ ನಿಷ್ಕರ್ಷಿಸಿಲ್ಲವಾದ್ದರಿಂದ ಉಡುಪಿನ ಸಮಸ್ಯೆಯನ್ನು ಕೈಬಿಡಬಹುದೆಂದು ಸೂಚಿಸಿರುವರು. ಈಚೆಗೆ ಉನ್ನತ ಶಿಕ್ಷಣ ಹತ್ತಾರು ಪಾಲು ವಿಸ್ತರಿಸಿದ್ದರ ಫಲವಾಗಿ ಘಟಿಕೋತ್ಸವಕ್ಕೆ ಹಲವಾರು ಸಹಸ್ರ ಅಭ್ಯರ್ಥಿಗಳು ಬರುವಂತಾಗಿದೆ. ಗೈರುಹಾಜರಿಯಲ್ಲಿ ಪದವಿ ಪಡೆಯುವುದೂ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ಪರಿಶೀಲಿಸುತ್ತ ಕೊಠಾರಿ ಶಿಕ್ಷಣ ಆಯೋಗ, ಸಾಮೂಹಿಕವಾಗಿ ಪದವಿ ನೀಡಲು ನಡೆಸುವ ಘಟಿಕೋತ್ಸವ ಅರ್ಥಹೀನವೆಂದು ಟೀಕಿಸಿದೆ. ಪ್ರಾಚೀನ ಭಾರತದಲ್ಲಿ ಅಭ್ಯರ್ಥಿ ಪ್ರತ್ಯೇಕವಾಗಿ ಪಾಂಡಿತ್ಯ ಪ್ರದರ್ಶಿಸಿ ಪದವಿ ಪಡೆಯುತ್ತಿದ್ದ ಸಂಪ್ರದಾಯದೊಡನೆ ಹೋಲಿಸಿ ನೋಡಿದರೆ ಈ ಟೀಕೆ ಸಾಧುವೆನಿಸುತ್ತದೆ. ಹಾಗೂ ಇಂಥ ಸಾಮೂಹಿಕ ಪದವೀದಾನದಿಂದ ವಿದ್ಯಾರ್ಥಿಗಳೂ ಆ ಗೌರವದಲ್ಲಿ ಭಾಗಿಯಾದ ತೃಪ್ತಿ ಸಂತೋಷಗಳನ್ನು ಅನುಭವಿಸಲಾರರು. ಆದ್ದರಿಂದ ಇಂಥ ಅರ್ಥಹೀನ ಸಮಾರಂಭದ ಔಚಿತ್ಯವನ್ನು ಪ್ರಶ್ನಿಸಿ ಅದನ್ನು ಕೈಬಿಡುವುದೇ ಲೇಸೆಂದು ಸೂಚಿಸಿರುವವರೂ ಉಂಟು.

ಘಟಿಕೋತ್ಸವ ಪದವೀಪ್ರದಾನಕ್ಕಾಗಿ ಏರ್ಪಟ್ಟರೂ ಅದು ಒಂದು ಸಂಸ್ಕಾರಸೂಚಕವೂ ಆಗಿದೆ. ಕೆಲವು ವಿಶ್ವವಿದ್ಯಾಲಯಗಳು ಅದನ್ನು ಕೈಬಿಡಲು ಆಲೋಚಿಸಿದ್ದರೂ ಕೊಲ್ಕತ್ತ ವಿಶ್ವವಿದ್ಯಾಲಯ ಅದನ್ನು ಕೇವಲ ಸಂಶೋಧನೆಯ ಮತ್ತು ಸ್ನಾತಕೋತ್ತರ ತರಗತಿಯ ಅಭ್ಯರ್ಥಿಗಳಿಗೆ ಮಾತ್ರ ನಡೆಸಬೇಕೆಂದೂ ಮಿಕ್ಕವರಿಗೆ ಅವರವರ ಕಾಲೇಜುಗಳಲ್ಲೇ ಆ ಸಮಾರಂಭ ಏರ್ಪಡಿಸಬಹುದೆಂದೂ ತೀರ್ಮಾನಿಸಿರುವುದು. ಗೈರುಹಾಜರಿಯಲ್ಲಿ ಪಡೆಯಲಾಶಿಸುವವರಿಗೆ ಅಂಚೆಯ ಮೂಲಕ ಪ್ರಶಸ್ತಿಪತ್ರ ವಿತರಣೆ ಮಾಡಬಹುದೆಂದೂ ಸೂಚಿಸಿದೆ. ಅಲ್ಲದೆ ಸಮಾರಂಭಕ್ಕೆ ಬರತಕ್ಕ ಅಭ್ಯರ್ಥಿಗಳು ನಿರ್ದಿಷ್ಟಗೊಳಿಸಿದ ಪೋಷಾಕಿಗೆ ಬದಲು ಲಕ್ಷಣವಾಗಿ ತಮಗಿಷ್ಟವಾದ ಉಡುಪು ಧರಿಸಿದರೂ ಸಾಕೆಂದೂ ತೀರ್ಮಾನಿಸಿದೆ. ಇತರ ವಿಶ್ವವಿದ್ಯಾಲಯಗಳಲ್ಲೂ ಈ ಅಭಿಪ್ರಾಯಕ್ಕೆ ಬೆಂಬಲ ದೊರಕುತ್ತಿದೆ.

ಘಟಿಕೋತ್ಸವವು ವಿದ್ಯಾರ್ಥಿಯ ಜೀವನದಲ್ಲಿ ಒಂದು ರಸಮಯ ಸನ್ನಿವೇಶವೂ ಹೌದು. ಅದನ್ನು ಉಜ್ವಲಗೊಳಿಸಲು ಹಲವು ವಿಶೇಷ ಸಂಪ್ರದಾಯಗಳನ್ನು ಅನುಸರಿಸಲಾಗುತ್ತಿದೆ. ತನ್ನ ಜೀವನದಲ್ಲಿ ಒಂದು ನಿರ್ದಿಷ್ಟ ಘಟ್ಟವನ್ನು ಮುಟ್ಟಿದ ವಿದ್ಯಾರ್ಥಿಗೆ ಅದು ಆಯಕಟ್ಟಿನ ಕಾಲ. ಅದನ್ನು ವೈಭವೋಜ್ಜ ್ವಲಗೊಳಿಸಲೆಂದೇ ವಿದ್ಯಾಪೀಠದ ವಿಶಿಷ್ಟ ಪೋಷಾಕು; ಮಹಾನ್ ಪಂಡಿತರ, ನಾಯಕರ ಹಾಜರಾತಿ; ವಿಶೇಷ ರೀತಿಯ ವಿಧಿ ಸಂಸ್ಕಾರಗಳು; ಮಹಾವ್ಯಕ್ತಿಯೊಬ್ಬರಿಂದ ಉಪದೇಶ ಭಾಷಣ. ಆದರೆ ಪದವಿ ಪಡೆಯುವವರ ಸಂಖ್ಯೆ ಅಧಿಕಗೊಂಡಂತೆ, ಜೀವನದ ಸಮಸ್ಯೆಗಳು ಹೆಚ್ಚಿದಂತೆ ಕಾಲಕ್ರಮದಲ್ಲಿ ಅವೆಲ್ಲ ವ್ಯರ್ಥವಾಗಿ ತೋರುತ್ತಿವೆ. ಆದರೆ ಆಧುನಿಕ ಜೀವನ ಎಷ್ಟೇ ಜಟಿಲವಾದರೂ ವ್ಯಕ್ತಿಜೀವನದಲ್ಲಿ ಸಮಾರಂಭಗಳಿಗೆ ಸ್ಥಾನವಿದ್ದೇ ಇದೆ. ಹಾಗೂ, ಅದನ್ನು ಕೈಬಿಡುವುದರಿಂದ ವಿದ್ಯಾಕ್ಷೇತ್ರದಲ್ಲಿ ಪ್ರಾಚೀನಕಾಲದಿಂದ ನಡೆದುಬಂದ ಒಂದು ಸಂಸ್ಕಾರ ನಾಮಾವಶೇಷವಾಗುತ್ತದೆ. ವಿದ್ಯಾರ್ಥಿ ಜೀವನಕ್ಕೆ ಕಳಸವಿಡುವಂಥ ಸನ್ನಿವೇಶವೊಂದು ಇಲ್ಲವಾಗಿ ಜ್ಞಾನಪ್ರಗತಿಗೆ ಆದಷ್ಟು ಮಟ್ಟಿನ ಪ್ರಚೋದನೆ ತಪ್ಪಿಹೋಗುತ್ತದೆ. ಆದ್ದರಿಂದ ಅದನ್ನು ಅಗತ್ಯವೆನಿಸುವಂತೆ ಮಾರ್ಪಡಿಸಿ ಉಳಿಸಿಕೊಳ್ಳುವುದು ಒಳ್ಳೆಯದೆನಿಸದಿರದು. ಭಾರತೀಯ ಸಂಪ್ರದಾಯಗಳಿಗೆ ಒಪ್ಪುವಂತೆ ಇಡೀ ಘಟಿಕೋತ್ಸವದ ಉಡುಪಿನ ಸಮಸ್ಯೆಯನ್ನೂ ವಿಧಿ, ಸಂಸ್ಕಾರಗಳನ್ನೂ, ಕಾರ್ಯಕ್ರಮ ಗಳನ್ನೂ ಭಾರತದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಅನ್ವಯಿಸುವಂತೆ ಮಾರ್ಪಡಿಸಿ ಕೊಳ್ಳಬಹುದು. ಆ ಕಾರ್ಯವನ್ನು ನಿರ್ವಹಿಸಲು ಅಂತರ ವಿಶ್ವವಿದ್ಯಾಲಯ ಮಂಡಲಿ ಸೂಕ್ತ ಸಂಸ್ಥೆಯೆಂದು ಕೊಠಾರಿ ಶಿಕ್ಷಣ ಆಯೋಗವೂ ಸೂಚಿಸಿದೆ.

ಈಚೆಗೆ ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಘಟಿಕೋತ್ಸವಕ್ಕೆ ಬರತಕ್ಕ ಅಭ್ಯರ್ಥಿಗಳು ಬಿಳಿಯ ನಿಲುವಂಗಿ ಮತ್ತು ಷರಾಯಿಯನ್ನೂ (ಮಹಿಳೆಯರಾದರೆ ಬಿಳಿಯ ಸೀರೆ ಮತ್ತು ಕುಪ್ಪಸವನ್ನೂ) ಆಯಾ ಪದವಿಗೆ ನಿಷ್ಕರ್ಷಿಸಿರುವ ಬಣ್ಣದ ಬಿಲ್ಲೆಯನ್ನೂ (ಬ್ಯಾಡ್ಜ್) ಧರಿಸಬೇಕೆಂದು ಗೊತ್ತುಮಾಡಿವೆ.	(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ